| _version_ | 1866901043106807808 |

| author | ವಸಂತಕುಮಾರ್ ಜೆ |
| author_facet | ವಸಂತಕುಮಾರ್ ಜೆ |
| contents |
‘ಬದಲಾವಣೆ ಜಗದ ನಿಯಮ’ ಎಂಬಂತೆ ಜಗತ್ತಿನ ಎಲ್ಲಾ ಸಮಾಜಗಳು ಪರಿವರ್ತನೆಯ ಪ್ರಕ್ರಿಯೆಗೆ ಒಳಗಾಗಲೇಬೇಕು. ಪ್ರತಿ ರಾಷ್ಟ್ರಗಳು ವ್ಯಾವಹಾರಿಕ ದೃಷ್ಟಿಯಿಂದಲಾದರೂ ಇತರ ರಾಷ್ಟ್ರಗಳ ನಡುವೆ ಸಂಪರ್ಕವನ್ನು ಹೊಂದುತ್ತವೆ. ಇನ್ನು ಈ ಸಂಬಂಧ ಹೊಸದೇನಲ್ಲ. ನಾವು ಇತಿಹಾಸವನ್ನು ಅವಲೋಕಿಸಿ ನೋಡಿದರೆ ಅನೇಕ ರಾಜ ಮಹಾರಾಜರು ತಮ್ಮ ಸಾಮ್ರಾಜ್ಯ ವಿಸ್ತರಣೆಯ ಬರದಲ್ಲಿ ವಿದೇಶದ ಮೇಲೆ ದಾಳಿ ಮಾಡಿ ತಮ್ಮ ಅಸ್ತಿತ್ವ ಸ್ಥಾಪಿಸಿದ್ದನ್ನು ನೋಡಬಹುದು. ಇನ್ನೂ ಕೆಲವು ಪ್ರಮುಖ ರಾಜರು ವಿದೇಶಗಳ ಜೊತೆ ವ್ಯಾಪಾರ ವಹಿವಾಟುಗಳನ್ನು ಆರಂಭಿಸುವ ಮೂಲಕ ಬೆಲೆಬಾಳುವ ವಸ್ತುಗಳನ್ನು ಆಮದು-ರಫ್ತು ಮಾಡುವ ಮೂಲಕ ಹೆಚ್ಚು ಲಾಭಗಳಿಸಿರುವುದನ್ನು ತಿಳಿಯಬಹುದು. ಹೀಗೆ ಭಾರತ ದೇಶವು ಸಹ ಹಲವಾರು ದೇಶಗಳ ಜೊತೆ ಸಂಪರ್ಕ ಹೊಂದಿರುವುದನ್ನು ಕಾಣಬಹುದು. ಹಾಗೆಯೇ ಪಶ್ಚಿಮ ದೇಶಗಳ ಜೊತೆಯೂ ಸಂಪರ್ಕವನ್ನು ಹೊಂದುತ್ತಾ ಹಲವಾರು ಏರಿಳಿತಗಳನ್ನು ಹೊಂದಿದೆ. ಪಶ್ಚಿಮ ದೇಶಗಳ ನಡುವಿನ ಸಂಪರ್ಕವು ಅಲೆಕ್ಸಾಂಡರ್ ಎಂಬ ದಾಳಿಕೋರನಿಂದ ಆರಂಭವಾಯಿತು. ಸಂಘರ್ಷಾತ್ಮಕ ದೃಷ್ಟಿಕೋನವಿದ್ದ ಈ ಸಂಬಂಧವು ಮುಂದುವರಿದು ಶಾಂತಿಯುತವಾದ ವ್ಯಾಪಾರ ವ್ಯವಹಾರವನ್ನು ಹೊಂದುತ್ತಾ ಮುಂದುವರಿಯಿತು. ತದನಂತರ ಕಾಲಸಂದಂತೆ ಮಾನವನ ಜ್ಞಾನದ ತೃಷೆ ವಿಶ್ವವ್ಯಾಪಿಯಾಗಿ ಹರಡುತ್ತಾ ಪ್ರಪಂಚದ ಹಲವಾರು ಭೂಭಾಗಗಳನ್ನು, ಮಾನವರ ಅಸ್ತಿತ್ವದ ಸಮಾಜವನ್ನು ತಿಳಿಯುವ ಉತ್ಸಾಹ ಹಾಗೂ ಕುತೂಹಲದಿಂದ ಪಶ್ಚಿಮ ದೇಶಗಳ ಪ್ರಬಲ ರಾಷ್ಟ್ರಗಳ ರಾಜರು ಮುಂದಾದರು. ಇವರ ಸಹಾಯದ ನೆರವಿನಿಂದ ಸಾಹಸಿ ನಾವಿಕರು ಸೂಕ್ತ ತರಬೇತಿ ಪಡೆದು ದಿಕ್ಸೂಚಿ ಮಾಪನದ ಮೂಲಕ ಅನ್ವೇಷಣಾ ಕಾರ್ಯದಲ್ಲಿ ತೊಡಗಿದರು.

ಕ್ರಿಸ್ತಶಕ 15ನೇ ಶತಮಾನದಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ ಭಾರತದಲ್ಲಿ ಕೇರಳದ ಕ್ಯಾಲಿಕಟ್ ಎಂಬಲ್ಲಿಗೆ ಬಂದು ತಲುಪಿ ಅಲ್ಲಿನ ರಾಜರಿಂದ ಅನುಮತಿ ಪಡೆದು ವ್ಯಾಪಾರ ವಹಿವಾಟು ಆರಂಭಿಸಿದ. ಈ ಮೂಲಕ ಕಂಡುಹಿಡಿದ ಜಲಮಾರ್ಗದಿಂದ ಪೋರ್ಚುಗೀಸರು ಭಾರತಕ್ಕೆ ಬಂದು ತಮ್ಮ ಪ್ರಭಾವ ಬೀರತೊಡಗಿದರು. ನಂತರ ಕ್ರಮೇಣ ಪಶ್ಚಿಮ ರಾಷ್ಟ್ರಗಳು ತಮ್ಮ ತಮ್ಮ ಪ್ರಭಾವ ಬೀರುವ ಸಲುವಾಗಿ, ವ್ಯಾಪಾರದ ಸಲುವಾಗಿ ಭಾರತಕ್ಕೆ ಆಗಮಿಸಲು ಶುರು ಮಾಡಿದರು. 18ನೇ ಶತಮಾನದ ಹೊತ್ತಿಗೆ ಭಾರತಕ್ಕೆ ಬ್ರಿಟಿಷರು ಬಂದು “ಈಸ್ಟ್ ಇಂಡಿಯಾ ಕಂಪನಿ” ಸ್ಥಾಪಿಸಿ ವ್ಯಾಪಾರದಿಂದ ಶುರುಮಾಡಿ ಅದೇ ಶತಮಾನದ ಮಧ್ಯಭಾಗದ ಹೊತ್ತಿಗೆ ಭಾರತದಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದರು. ಈ ಮೂಲಕ ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರಭಾವಗೊಳಿಸುವ ಪ್ರಯತ್ನವನ್ನು ಮಾಡಿದರು. ಬ್ರಿಟಿಷರು ಕೈಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸಿದ ಭಾಗವಾಗಿ ಹಲವಾರು ಕಾರ್ಖಾನೆ ಸ್ಥಾಪಿಸಿ ಕಚ್ಚಾ ಸಾಮಗ್ರಿಗಳನ್ನು ಬಳಸಿ ಅತ್ಯಧಿಕ ಸಿದ್ಧ ವಸ್ತುಗಳನ್ನು ತಯಾರಿಸಿ ಹೆಚ್ಚು ಲಾಭ ಪಡೆಯಲು ಮುಂದಾದರು. ಇದರಿಂದ ಭಾರತವು ಆರ್ಥಿಕ ಶೋಷಣೆಗೆ ಒಳಗಾಯಿತು. ಇದರ ಜೊತೆಗೆ ಬಹು ಮುಖ್ಯವಾದ ಅಂಶವೇನಂದರೆ ಬ್ರಿಟಿಷರ ಆಳ್ವಿಕೆಯಿಂದ ಭಾರತೀಯ ಸಾಮಾಜಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿತು. ಭಾರತ ದೇಶವು ನಡೆ-ನುಡಿ, ಆಚರಣೆ, ರೂಢಿ ಸಂಪ್ರದಾಯಗಳನ್ನು ಹೊಂದಿದ್ದು ಸನಾತನ ಕಾಲದಿಂದಲೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಹಲವಾರು ಗ್ರಂಥಗಳು ಬೆನ್ನೆಲುಬಾಗಿವೆ. ವೇದಗಳ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಸಾಂಸ್ಕೃತಿಕ ಶ್ರೀಮಂತಿಕೆ ಸಾಗುತ್ತದೆ. ‘ಅತಿಥಿ ದೇವೋ ಭವ’ ಎಂಬ ಉಕ್ತಿ ಇದಕ್ಕೆ ನಿದರ್ಶನವಾಗಿದೆ. ಇಂತಹ ಸಂಸ್ಕೃತಿಯ ಗತವೈಭವದ ಮೇಲೆ ಪಶ್ಚಿಮ ದೇಶಗಳ ಸಂಪರ್ಕದಿಂದ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತಿರುವುದನ್ನು ನಾವು ಗಮನಿಸಬಹುದು.

ಪಶ್ಚಿಮ ದೇಶಗಳ ಸಂಪರ್ಕದಿಂದ ಭಾರತದ ಸಂಸ್ಕೃತಿ ಅಲ್ಲದೆ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ. ಚಿಂತಕರಾದ ರಾಮ್ ಅಹುಜಾ ರವರು ಸಹ ಭಾರತವು ಹೊಂದಿರುವ ಸಾಮಾಜಿಕ ಸಾಂಸ್ಕೃತಿಕ ಪ್ರಭಾವ ಮತ್ತು ಪರಿಣಾಮಗಳನ್ನು ವಿವಿಧ ಹಂತಗಳಲ್ಲಿ ಗುರುತಿಸಿದ್ದಾರೆ. ಪಾಶ್ಚಾತ್ಯ ಸಂಪರ್ಕದಿಂದ ಭಾರತೀಯ ಸಮಾಜದಲ್ಲಿ ಭಾರಿ ಪರಿವರ್ತನೆಗಳಾಗಿವೆ, ಆಗುತ್ತಲಿವೆ. ಒಂದು ಬಗೆಯ ಸಂಘರ್ಷದಿಂದ ಆರಂಭವಾದ ಸಂಪರ್ಕವು ನಿರಂತರವಾಗಿ ಮುಂದುವರಿಯುತ್ತಾ ಜೀವಂತವಾಗಿ ಸಾಗುತ್ತಲಿದ್ದು ಈಗಲೂ ಮುಂದುವರಿಯುತ್ತಿದೆ. ಉದಾರೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಗಳು ಬಹು ವ್ಯಾಪಕವಾಗಿ ಪ್ರಸಾರಗೊಳ್ಳುತ್ತಿರುವ ಪ್ರಸ್ತುತ ದಿನಮಾನದಲ್ಲಿ ಪಶ್ಚಿಮ ದೇಶಗಳೊಂದಿಗೆ ಭಾರತವು ಯಾವ ರೀತಿಯ ಸಂಪರ್ಕ ಹೊಂದಿದೆ? ಮತ್ತು ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿದೆಯೇ? ಅಥವಾ ಮಾರಕವಾಗಿದೆಯೇ? ಎಂದು ಹೇಳುವುದು ಕಷ್ಟವಾಗಿದೆ. ಆದರೂ ಪಾಶ್ಚಾತ್ಯ ದೇಶಗಳ ಪ್ರಭಾವವಂತೂ ಮುಂದುವರಿದಿದೆ. ಪಶ್ಚಿಮ ದೇಶಗಳ ಪ್ರಭಾವವನ್ನು ಪಾಶ್ಚಾತ್ಯೀಕರಣವೆಂದು ಕರೆದಿದ್ದು ಪಶ್ಚಿಮ ದೇಶದ ಅದರಲ್ಲೂ ಇಂಗ್ಲೆಂಡ್ ದೇಶವು ಭಾರತದಲ್ಲಿ ಸುದೀರ್ಘವಾಗಿ ಆಳ್ವಿಕೆ ಮಾಡಿದ ಪರಿಣಾಮವಾಗಿ ಭಾರತದ ಮೇಲೆ ಗಾಢವಾದ ಪ್ರಭಾವ ಬೀರಿದೆ. ನಿತ್ಯ ಜೀವನದ ಹಲವಾರು ಚಟುವಟಿಕೆಗಳಲ್ಲಿ ನಾವು ಹೊಸದನ್ನು ಕಾಣುತ್ತೇವೆ. ಭಾರತದ ಹೆಸರಾಂತ ಸಮಾಜಶಾಸ್ತ್ರಜ್ಞರಾದ ಕರ್ನಾಟಕದ ಮೈಸೂರಿನವರಾದ ಎಂ. ಎನ್. ಶ್ರೀನಿವಾಸ್ ರವರು ಪಶ್ಚಿಮ ದೇಶಗಳ ಪ್ರಭಾವವನ್ನು ಕುರಿತು ‘ಪಾಶ್ಚಾತ್ಯೀಕರಣ’ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದಾರೆ. ಅದೆಷ್ಟೋ ಭಾರತೀಯರು ಪಾಶ್ಚಾತ್ಯ ಮಾದರಿಯಲ್ಲಿ ತಮ್ಮ ಜೀವನಕ್ರಮವನ್ನು ರೂಪಿಸಿಕೊಳ್ಳತೊಡಗಿದರು. ಈ ಜೀವನ ಕ್ರಮ ಅವರಿಗೆ ಹೇಗೆ ಹಿಡಿಸಿತು? ಅದರ ಆಕರ್ಷಣೆ ಬಲವಾಗಿ ಎಲ್ಲರಿಗೂ ಅದು ಹೇಗೆ ಪ್ರಿಯವಾಯಿತು? ಇದರಿಂದ ಆ ಜೀವನ ಕ್ರಮದ ಅನುಕರಣೆ ಹೇಗೆ ಮಾಡತೊಡಗಿದರು ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಪಾಶ್ಚಾತ್ಯೀಕರಣವನ್ನು ಕುರಿತು ಎಂ. ಎನ್. ಶ್ರೀನಿವಾಸ್ ರವರು “ಪಾಶ್ಚಾತ್ಯೀಕರಣದ ಪ್ರಕ್ರಿಯೆಯು ಸುಮಾರು 150 ವರ್ಷಗಳಿಗೂ ಮಿಗಿಲಾಗಿ ಬ್ರಿಟಿಷ್ ಆಳ್ವಿಕೆಯು ಭಾರತೀಯ ಸಮಾಜದ ಮತ್ತು ಸಂಸ್ಕೃತಿಗಳಲ್ಲಿ ಉಂಟುಮಾಡಿದ ಪರಿವರ್ತನೆಗಳನ್ನು ಅದರಲ್ಲೂ ಮುಖ್ಯವಾಗಿ ತಾಂತ್ರಿಕತೆ, ಸಂಸ್ಥೆಗಳು, ತತ್ವಾದರ್ಶ ಹಾಗೂ ಮೌಲ್ಯಗಳ ಕ್ಷೇತ್ರಗಳಲ್ಲಿ ಆದ ಪರಿವರ್ತನೆಗಳನ್ನು ಸಂಕೇತಿಸುವುದು” ಎಂದಿದ್ದಾರೆ.

ಭಾರತದ ಸಾಮಾಜಿಕ ವ್ಯವಸ್ಥೆ ಮತ್ತು ಸಂಸ್ಕೃತಿಯ ಕ್ಷೇತ್ರಗಳ ಮೇಲೆ ಪಶ್ಚಿಮದ ಸಂಸ್ಕೃತಿಯು ಬೀರಿರುವ ಪ್ರಭಾವ ಪರಿಣಾಮಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು.

1. ಸಾಂಸ್ಥಿಕ ಕ್ಷೇತ್ರದ ಮೇಲೆ ಪ್ರಭಾವ:

ಪಾಶ್ಚಾತ್ಯ ಸಂಸ್ಕೃತಿಯು ಭಾರತೀಯ ಸಮಾಜದ ವಿವಿಧ ಸಂಸ್ಥೆಗಳ ಮೇಲೆ ಪ್ರಭಾವ ಬೀರಿದೆ. ಆಡಳಿತ ವ್ಯವಸ್ಥೆ, ಶಿಕ್ಷಣ, ಧರ್ಮ, ಉದ್ಯಮಗಳು, ಕಾನೂನುಗಳು, ಮಾಧ್ಯಮ, ಕಲೆ ಮುಂತಾದ ಅಂಶಗಳನ್ನು ಒಳಗೊಂಡಿದೆ.

ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವ: ಭಾರತವು ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ಗುರುಕುಲ ಶಿಕ್ಷಣದಿಂದ ವಿವಿಧ ಘಟಿಕಾಸ್ಥಾನ, ಅಗ್ರಹಾರದಲ್ಲಿ ಉನ್ನತ ಶಿಕ್ಷಣ ನೀಡುತ್ತಾ ವಿಶ್ವವಿದ್ಯಾನಿಲಯಗಳ ಸ್ಥಾಪನೆಯವರೆಗೆ ವ್ಯವಸ್ಥಿತ ಕ್ರಮವನ್ನು ಹೊಂದಿತ್ತು. ಈ ಶಿಕ್ಷಣವು ಆಧ್ಯಾತ್ಮಿಕ ಸ್ವರೂಪದಲ್ಲಿತ್ತು. ಉನ್ನತ ಮತ್ತು ಮೇಲ್ವರ್ಗಗಳಿಗೆ ಸೀಮಿತವಾಗಿತ್ತು. ಶಿಕ್ಷಕರ ಪಾತ್ರಗಳು ಗುಣಾತ್ಮಕ ಹಾಗೂ ವಿವರಣಾತ್ಮಕವಾಗಿದ್ದವು. ಆದರೆ ಬ್ರಿಟಿಷರು ಪರಿಚಯಿಸಿದ ಇಂಗ್ಲಿಷ್ ಶಿಕ್ಷಣವು ಪಶ್ಚಿಮದ ಸಂಸ್ಕೃತಿಯ ಪ್ರಸಾರಕ್ಕೆ ರಹದಾರಿಯಾಯಿತು. ಭಾರತದಲ್ಲಿದ್ದ ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳ ಸ್ಥಾನದಲ್ಲಿ ಪಾಶ್ಚಾತ್ಯ ಮಾದರಿಯ ಶಿಕ್ಷಣ ಸಂಸ್ಥೆಗಳು ಸ್ಥಾಪಿತವಾದವು. ಔಪಚಾರಿಕ ಮಾದರಿಯ ಶಾಲಾ ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ವೃತ್ತಿಪರ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಸ್ಥಾಪಿತವಾದವು. ಇಂಗ್ಲಿಷ್ ಶಿಕ್ಷಣ ಮಾಧ್ಯಮವು ಪ್ರಾಮುಖ್ಯತೆ ಪಡೆಯಿತು. ಬೋಧನಾ ವಿಷಯದಲ್ಲಿ ಬದಲಾವಣೆಯಾಯಿತು. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ವಿಷಯಗಳು ಪರಿಚಯಿಸಲ್ಪಟ್ಟವು. ಯಾವುದೇ ಜಾತಿ, ಮತ, ಪಂಥ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನವಾದ ಅವಕಾಶವನ್ನು ನೀಡಲಾಗುತ್ತಿದೆ. ಉನ್ನತ ಶಿಕ್ಷಣ ಪಡೆಯುವ ಮಂದಿ ಪ್ರಸ್ತುತ ದಿನಗಳಲ್ಲಿ ವಿವಿಧ ರಾಷ್ಟ್ರಗಳಿಗೂ ತೆರಳಿ ಶಿಕ್ಷಣ ಪಡೆಯುತ್ತಿದ್ದಾರೆ.

ಕಾನೂನು ವ್ಯವಸ್ಥೆಯ ಬೆಳವಣಿಗೆ: ಪಾಶ್ಚಾತ್ಯೀಕರಣದ ಪ್ರಕ್ರಿಯೆಯು ಹೊಸ ಕಾನೂನು ನಿಯಮಗಳನ್ನು ತಂದಿತು. ಸಾರ್ವತ್ರಿಕ ಕಾನೂನಿನ ಬೆಳವಣಿಗೆ ಭಾರತದಲ್ಲಿ ಪ್ರಾರಂಭವಾಯಿತು. ಹಿಂದೆ ಇದ್ದ ಕಾನೂನು ವ್ಯವಸ್ಥೆಯು ಉಳ್ಳವರ ಹಾಗೂ ಶ್ರೇಣಿ ವ್ಯವಸ್ಥೆ ಆಧಾರದಲ್ಲಿ ಸ್ಥಾಪಿತವಾಗಿತ್ತು. ಈ ಶ್ರೇಣಿ ವ್ಯವಸ್ಥೆಯ ವ್ಯವಸ್ಥೆಯಲ್ಲಿ ಕೆಳ ಜಾತಿಯ ವ್ಯಕ್ತಿಗಳು ಉನ್ನತ ಜಾತಿಯವರಿಗೆ ನಿಂದಿಸಿದರೆ ಕಠಿಣ ದಂಡ ತೆರಬೇಕಾಗಿತ್ತು. ಅದೇ ಮೇಲ್ಜಾತಿಯವರು ಕೆಳಜಾತಿಯವರನ್ನು ನಿಂದಿಸಿದರೆ ಸಾಧಾರಣ ದಂಡವನ್ನು ನೀಡುವ ವ್ಯವಸ್ಥೆ ಇತ್ತು. ಇಂತಹ ಕಾನೂನು ವ್ಯವಸ್ಥೆಯೇ ಮುಂದುವರಿಯುತ್ತಿತ್ತು. ಆದರೆ ಬ್ರಿಟಿಷರ ಅಧಿಕಾರ ಸ್ಥಾಪನೆಯಿಂದ ದೇಶದ ಕಾನೂನು ವ್ಯವಸ್ಥೆಯಲ್ಲಿ ಹೊಸ ತಿರುವು ಪಡೆಯಿತು. ಸಾರ್ವತ್ರಿಕತೆ ಮತ್ತು ವೈಚಾರಿಕತೆ ತತ್ವಗಳ ಮೇಲೆ ಹೊಸ ನ್ಯಾಯಾಂಗ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಎಲ್ಲರಿಗೂ ಸಮಾನವಾದ ಸ್ವಾತಂತ್ರ್ಯ, ಸಮಾನತೆಯ ಅಂಶಗಳನ್ನು ಒಳಗೊಂಡಂತೆ ಸಾಮಾಜಿಕ ಸುಧಾರಣೆಯ ಶಾಸನಗಳು ಜಾರಿಗೆ ಬಂದವು. ಜಾತಿ ನಿಯಮಗಳು ಮತ್ತು ಜಾತಿ ಪಂಚಾಯಿತಿ ಜಾಗದಲ್ಲಿ ಆಧುನಿಕ ಕಾನೂನು, ಶಾಸನ, ನ್ಯಾಯಾಲಯ, ಪೊಲೀಸ್ ಹಾಗೂ ಸೈನಿಕ ವ್ಯವಸ್ಥೆಗಳು ಸ್ಥಾಪನೆಯಾಗಿ “ಕಾನೂನಿನ ಎದುರು ಎಲ್ಲರೂ ಸಮಾನರು” ಎಂಬ ತತ್ವ ಸ್ಥಾಪನೆಯಾಗಿದೆ.

ಆರ್ಥಿಕ ಕ್ಷೇತ್ರದಲ್ಲಿನ ಬದಲಾವಣೆಗಳು: ಪಾಶ್ಚಾತ್ಯ ಸಂಸ್ಕೃತಿಯು ಭಾರತದ ಆರ್ಥಿಕತೆಯ ಮೇಲೆ ಗಾಢವಾದ ಪ್ರಭಾವ ಬೀರಿದೆ. ಸಾಂಪ್ರದಾಯಿಕವಾಗಿ ಕೃಷಿ ಪದ್ಧತಿಯು ಅತಿ ದೊಡ್ಡ ಉದ್ಯೋಗವಾಗಿತ್ತು. ಜೊತೆಗೆ ಕರಕುಶಲ ಗ್ರಾಮ ಆಧಾರಿತ ಉದ್ಯಮಗಳು, ಗುಡಿ ಕೈಗಾರಿಕೆಗಳು ಹೆಚ್ಚಿದ್ದವು. ಇಂತಹ ವ್ಯವಸ್ಥೆಯ ಮೇಲೆ ಬ್ರಿಟಿಷರ ಆಡಳಿತ ನೀತಿ ಪರಿಣಾಮ ಬೀರಿತು. ಬ್ರಿಟಿಷರು ಭಾರತದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಈ ಎಲ್ಲಾ ವ್ಯವಸ್ಥೆ ನಾಶವಾಯಿತು. ಹೊಸ ಉದ್ಯಮಗಳೊಂದಿಗೆ ಆರ್ಥಿಕ ಪುನರ್ರಚನೆ ಮಾಡಿದರು. ಅಗಾಧವಾದ ಕಚ್ಚಾ ಸಾಮಗ್ರಿಗಳ ಬಳಕೆಯಿಂದ ಉತ್ಪನ್ನ ಹೆಚ್ಚಿಸಿ ಆರ್ಥಿಕ ಲಾಭ ಪಡೆಯಲು ಮುಂದಾದರು. ಭಾರತೀಯರು ಕಚ್ಚಾ ಸಾಮಗ್ರಿಗಳ ಪೂರೈಕೆದಾರರಾದರು. ಆಧುನಿಕ ಕೈಗಾರಿಕೆಗಳು, ಆರ್ಥಿಕ ಬೆಳವಣಿಗೆಗಳು ಭರದಿಂದ ಅಭಿವೃದ್ಧಿ ಹೊಂದಿದವು. ಆಧುನಿಕ ಕೈಗಾರಿಕೆಗಳು ಹೊಸ ಜೀವನ ವಿಧಾನಕ್ಕೆ ಕಾರಣವಾಯಿತು. ಈ ಮೂಲಕ ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅಂಚೆ ಸೇವೆ, ರೈಲ್ವೆ, ಸಾರಿಗೆ, ಸಂಪರ್ಕ ವಿಸ್ತರಣೆಗೆ ಅವಕಾಶವಾಯಿತು. ಇದರಿಂದ ಹೊಸ ಹೊಸ ಉದ್ಯೋಗಾವಕಾಶಗಳು ಹುಟ್ಟಿದವು. ಕ್ರಮೇಣ ಸಾಂಪ್ರದಾಯಿಕ ಜಾತಿ ವ್ಯವಸ್ಥೆಯು ಅಸ್ಥಿರವಾಗಿ ಸಾಮಾಜಿಕ ನ್ಯಾಯ ಬೇರೂರಿತು. ಹಿಂದೆ ಇದ್ದ ‘ಜಾಜಮಾನಿ ವ್ಯವಸ್ಥೆ' ನಿರ್ಮೂಲನೆಯಾಯಿತು. ಹೊಸ ಬಗೆಯ ವಾಣಿಜ್ಯ ವ್ಯವಹಾರ ಸಂಸ್ಥೆಗಳು, ಬ್ಯಾಂಕುಗಳು, ಕಂಪನಿಗಳು, ಕೂಡು ಬಂಡವಾಳ ವ್ಯವಸ್ಥೆ, ಸಹಕಾರಿ ಸಂಸ್ಥೆಗಳು ಹೀಗೆ ಮೊದಲಾದ ಹೊಸ ಹೊಸ ಆರ್ಥಿಕ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಯಿತು.

ಧಾರ್ಮಿಕ ಕ್ಷೇತ್ರದ ಬದಲಾವಣೆಗಳು: ಅನಾದಿಕಾಲದಿಂದಲೂ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮವು ಪ್ರಾಬಲ್ಯ ಹೊಂದಿತ್ತು. ಸಮಾಜದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯೆಲ್ಲವೂ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿ ಆಚರಣೆಯಲ್ಲಿತ್ತು, ಜೀವನದ ಮೌಲ್ಯಗಳು, ಆಧ್ಯಾತ್ಮಿಕತೆ ಎಲ್ಲ ವ್ಯಕ್ತಿಗಳನ್ನು ಆವರಿಸಿತ್ತು. ಆರ್ಥಿಕ ಲಾಭ ಪಡೆಯುವುದಕ್ಕಿಂತ ಜೀವನದ ಸಾಕ್ಷಾತ್ಕಾರ ಪಡೆಯುವುದು ಅಗ್ರಗಣ್ಯವಾಗಿತ್ತು. ಪಶ್ಚಿಮ ದೇಶಗಳಲ್ಲಿನ ಧರ್ಮಗಳು ಆರ್ಥಿಕತೆಗೆ ಉತ್ತೇಜನ ನೀಡಿದರೆ ಭಾರತದಲ್ಲಿ ಧಾರ್ಮಿಕ ಪಠಣ, ಆಚರಣೆ, ನಡೆ-ನುಡಿ ಧರ್ಮದ ಮಾರ್ಗದಲ್ಲಿ ಮೋಕ್ಷ ಸಂಪಾದಿಸುವುದಾಗಿದೆ. ಆದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಸಾಂಪ್ರದಾಯಿಕವಾಗಿ ಧಾರ್ಮಿಕ ಆಚರಣೆಯಲ್ಲಿ ಪರಿವರ್ತನೆಗಳಾದವು. ವಿಜ್ಞಾನ ಮತ್ತು ಪಾಶ್ಚಾತ್ಯ ಶಿಕ್ಷಣವು ಧರ್ಮದ ಬಗೆಗಿನ ಮನೋಭಾವನೆಯಲ್ಲಿ ಬದಲಾವಣೆ ಮಾಡಿತು. ಧರ್ಮದ ಸಾಮಾಜಿಕ ಮೌಲ್ಯವು ಇಂದು ಕಡಿಮೆಯಾಗಿದೆ. ವೈಯಕ್ತಿಕ ಆಚರಣೆಯಾಗಿದೆ. ಬ್ರಿಟಿಷರು ನೀಡಿದ ಆರ್ಥಿಕ ಉತ್ತೇಜನ ಶಿಕ್ಷಣ ತಂತ್ರಜ್ಞಾನದಿಂದ, ಕೈಗಾರಿಕೆಗಳಿಂದ ಆರ್ಥಿಕ ಪರಿವರ್ತನೆಗಳಾಗಿ ಹೊಸ ಜೀವನ ಪದ್ಧತಿಗಳು ಬೆಳವಣಿಗೆ ಹೊಂದಿದವು. ಕ್ರಮೇಣ ಈ ಬೆಳವಣಿಗೆಗಳು ಮುಂದುವರಿದು ‘ಮತಾತೀತಕರಣ’ ವ್ಯವಸ್ಥೆಯು ಬೆಳೆಯಿತು. ಧರ್ಮದ ಸಾಮಾಜಿಕ ಮೌಲ್ಯವು ಕಡಿಮೆಯಾಗುತ್ತಿದೆ. ಆದರೂ ಧಾರ್ಮಿಕ ಅಂಶಗಳು ಪ್ರಭಾವ ಬೀರುತ್ತವೆ. ಧಾರ್ಮಿಕ ಪುನರ್ ರಚನೆಯು ಸಹ ಸಮಾಜದಲ್ಲಿ ಇರುವುದನ್ನು ನಾವು ಗಮನಿಸಬಹುದು.

ತಾಂತ್ರಿಕ ಕ್ಷೇತ್ರದಲ್ಲಿನ ಬದಲಾವಣೆಗಳು: ಜಾಗತೀಕರಣದೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವು ತಾಂತ್ರಿಕ ಕ್ಷೇತ್ರದಲ್ಲೂ ಗಮನಾರ್ಹವಾಗಿದೆ. ತಂತ್ರಜ್ಞಾನದ ಹರಡುವಿಕೆಯಿಂದಾಗಿ ಪಶ್ಚಿಮ ದೇಶಗಳಲ್ಲಿನ ಹೊಸ ಆವಿಷ್ಕಾರಗಳು, ಭಾರಿ ಯಂತ್ರಗಳು, ಸಂವಹನ ತಂತ್ರಜ್ಞಾನಗಳು ಬಳಕೆಯಾಗುತ್ತಿವೆ. ಮಾಹಿತಿಗಳ ವಿನಿಮಯದಿಂದ ಸಾಂಸ್ಕೃತಿಕ ಅಂಶಗಳು ಕಾಣುವುದನ್ನು ನಾವು ನೋಡಬಹುದಾಗಿದೆ. ಮುದ್ರಣ ಯಂತ್ರದಿಂದ ಹಿಡಿದು ಡಿಜಿಟಲ್ ತಂತ್ರಜ್ಞಾನದವರೆಗೆ ಗಣನೀಯ ಪ್ರಗತಿ ಸಾಧಿತವಾಯಿತು. ದೇಶವು ಆಧುನಿಕತೆಯತ್ತ ದಾಪುಗಾಲು ಹಾಕಲು ಇದರಿಂದ ಸಾಧ್ಯವಾಗುತ್ತಿದೆ.

2. ಹೊಸ ಮೌಲ್ಯಗಳ ಹಾಗೂ ತತ್ವ ಆದರ್ಶಗಳ ಆಯ್ಕೆ:

ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮವಾಗಿ ಮಾನವತಾವಾದ, ವಿಚಾರವಾದ, ಸಮಾನತಾವಾದ ಮತ್ತು ಮತಾತೀತವಾದ ಮುಂತಾದ ಮೌಲ್ಯಗಳು ಹಾಗೂ ತತ್ವದರ್ಶಗಳು ಸೇರಿಕೊಂಡಿವೆ. ಆದ್ದರಿಂದಲೇ ಈ ಪ್ರಕ್ರಿಯೆ ಪ್ರಭಾವಕ್ಕೆ ಸಿಕ್ಕಿದ ಮಾನವರೆಲ್ಲರೂ ಸರಿಸಮಾನರು ಎಂಬ “ಸಮಾನತೆಯ ತತ್ವ”ವನ್ನು ಎತ್ತಿ ಹಿಡಿಯುತ್ತಾರೆ. ಎಲ್ಲಾ ಜನರ ಕಲ್ಯಾಣವನ್ನು ಹರಸುವ ಮಾನವತಾವಾದವನ್ನು ಬೆಂಬಲಿಸುತ್ತಾರೆ. ಸರಿ ತಪ್ಪುಗಳೆಂಬ ವಿಚಾರವಾದದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಲು ಬಯಸುತ್ತಾರೆ. ಮತ ಧಾರ್ಮಿಕ ವಿಷಯಗಳನ್ನು ಶಿಕ್ಷಣ, ರಾಜಕಾರಣ, ಆಡಳಿತ ಮುಂತಾದ ಮತಾತೀತವಾದವನ್ನು ಸಮರ್ಥಿಸುತ್ತಾರೆ. ವೈಚಾರಿಕತೆಯಿಂದ ಕೂಡಿರುವ ವಿಚಾರಗಳು ಪ್ರಾಮುಖ್ಯತೆ ಪಡೆಯುತ್ತವೆ. ಸ್ವಾತಂತ್ರ್ಯ ಬಂದ ನಂತರವೂ ಅವುಗಳ ಪ್ರಭಾವ ಮುಂದುವರಿಯುತ್ತದೆ. ಮಾನವೀಯ ಮೌಲ್ಯಗಳು ಹಾಗೂ ವೈಚಾರಿಕೀಕರಣದ ಪ್ರಭಾವದ ಉದಾಹರಣೆಯಾಗಿ ನಾವು “ಅಸ್ಪೃಶ್ಯತೆ ಆಚರಣೆ”ಯ ವಿರುದ್ಧವಾಗಿ ನಡೆಸಲಾದ ಆಂದೋಲನವನ್ನು ಸ್ಮರಿಸಬಹುದು. ಮಾನವತಾವಾದದ ಪರಿಣಾಮವಾಗಿ ಕ್ಷಾಮ ಹಾಗೂ ಪ್ರವಾಹದ ಪರಿಸ್ಥಿತಿಗಳನ್ನು ಎದುರಿಸುವಲ್ಲಿ, ಸಾಂಕ್ರಾಮಿಕ ರೋಗಗಳ ನಿಯಂತ್ರಿಸುವಲ್ಲಿ, ಶಿಕ್ಷಣ ಸಂಸ್ಥೆ ಹಾಗೂ ಅನಾಥಾಲಯಗಳನ್ನು ತೆರೆಯುವಲ್ಲಿ ಬ್ರಿಟಿಷರು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡರು. ಜೊತೆಗೆ ಕ್ರೈಸ್ತ ಮಿಷನರಿಗಳು ಕೂಡ ಮಾನವೀಯ ದೃಷ್ಟಿಯಲ್ಲಿ ಹರಿಜನರಿಗೆ, ಸ್ತ್ರೀಯರಿಗೆ, ಅನಾಥರಿಗೆ, ಕುಷ್ಠರೋಗಿಗಳಿಗೆ, ಆದಿವಾಸಿಗಳಿಗೆ ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಯನ್ನು ನೀಡತೊಡಗಿದರು. ಹಿಂದೂ ಜಾತಿಗಳ ಹಾಗೂ ಸಂಸ್ಥೆಗಳ ಬಗ್ಗೆ ಅವರು ಮಾಡಿದ ಟೀಕೆಗಳು ಹಿಂದೂ ಧರ್ಮವನ್ನು ತಾತ್ವಿಕವಾಗಿ ಪುನರ್ ವಿಮರ್ಶೆ ಮಾಡುವ ಪ್ರಯತ್ನವು ನಡೆಯಿತು. ಇಂತಹ ಬೆಳವಣಿಗೆಗಳು ಭಾರತದಲ್ಲಿ ಸುಧಾರಣಾ ಆಂದೋಲನಗಳಿಗೂ ಕಾರಣವಾಯಿತು.

3. ಜೀವನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಯಕೆ:

ಪಶ್ಚಿಮ ದೇಶಗಳ ವಿಜ್ಞಾನ ತಂತ್ರಜ್ಞಾನಗಳ ಶೋಧನೆಯಿಂದ ಮತ್ತು ಬಳಕೆಯಿಂದ ಕೈಗಾರಿಕಾ ಉದ್ಯಮ ತ್ವರಿತಗತಿಯಲ್ಲಿ ಬೆಳೆಯಿತು. ಈ ಬೆಳವಣಿಗೆಯಿಂದ ತ್ವರಿತವಾದ ಆರ್ಥಿಕ ಸಂಪತ್ತು ವೃದ್ಧಿಸುವಲ್ಲಿ ಯಶಸ್ವಿಯಾಗಿ ಜನರಲ್ಲಿ ಹೊಸ ಆಶಯಗಳನ್ನು ಮೂಡಿಸಿತು. ಅನಾದಿಕಾಲದಿಂದ ರೂಢಿಸಿಕೊಂಡು ಬಂದಿದ್ದ ಆಧ್ಯಾತ್ಮದ ಬಗೆಗಿನ ಸೆಳೆತ ಕಡಿಮೆಯಾಯಿತು. ಐಹಿಕ ಜೀವನದ ಸುಖಭೋಗಗಳ ಕಡೆಗಿನ ಆಕರ್ಷಣೆ ಹೆಚ್ಚತೊಡಗಿತು. ವೈಯಕ್ತಿಕ ಹಿತ ಸುಖಾಪೇಕ್ಷೆಗಳು ಹೆಚ್ಚಾದವು. ತಮ್ಮ ಭೌತಿಕ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳುವ ತವಕ ಎಲ್ಲರಲ್ಲಿಯೂ ಸಾಮಾನ್ಯವಾಗಿ ಬೆಳೆಯತೊಡಗಿತು. ಈ ಮೂಲಕ ಹೆಚ್ಚೆಚ್ಚು ಭೌತಿಕ ಸಂಪತ್ತನ್ನು ಸಂಗ್ರಹಿಸುವ ಬಯಕೆಯನ್ನು ಜನರು ಬೆಳೆಸಿಕೊಳ್ಳತೊಡಗಿದರು. ಶ್ರೀಮಂತಿಕೆಯನ್ನು ಪಡೆಯಲು ಉತ್ಸುಕರಾದರು. ಇದರಿಂದಾಗಿ ಭೌತಿಕ ಪ್ರಗತಿಯು ವೇಗ ಪಡೆಯಿತು.

4. ರಾಜಕೀಯ ಮೌಲ್ಯಗಳ ಪುನರ್ರಚನೆ:

ವ್ಯಾಪಾರದ ದೃಷ್ಟಿಯಿಂದ ಭಾರತಕ್ಕೆ ಬಂದಿದ್ದ ಬ್ರಿಟಿಷರು ಕ್ರಮೇಣ ಸಮಯ ಸಾಧಕತನದಿಂದ ಭಾರತದಲ್ಲಿ ಆಡಳಿತವನ್ನು ಪ್ರಾರಂಭಿಸಿದರು. ನಂತರ ಸ್ವಾತಂತ್ರ್ಯ ಆಂದೋಲನದ ಪರಿಣಾಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ ಮಾಡಿ ವಾಪಸ್ಸಾದರು. ಆದರೆ ಭಾರತದಲ್ಲಿ ಅವರು ಪರಿಚಯಿಸಿದ ಪಾಶ್ಚಾತ್ಯ ಮಾದರಿಯ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಭಾರತದಲ್ಲಿ ಭದ್ರವಾಗಿ ಬೇರೂರಿತು. ಈ ಹಿಂದೆ ರಾಜಾಡಳಿತ, ರಾಜ್ಯಸತ್ತೆ ಅಂತ್ಯಗೊಂಡಿತು. ಸ್ವಾತಂತ್ರ್ಯ ನಂತರ ಭಾರತದಲ್ಲಿ ಇದ್ದ ಸುಮಾರು 562 ಸಂಸ್ಥಾನಗಳು ಸರ್ದಾರ್ ವಲ್ಲಭಭಾಯಿ ಪಟೇಲರ ಪರಿಶ್ರಮದಿಂದ ಒಗೂಡಿದವು. ಆಗ ಭಾರತದ ರಾಜಕೀಯ ನೇತಾರರು, ಬುದ್ಧಿಜೀವಿಗಳು, ಬ್ರಿಟಿಷ್ ಮಾದರಿಯ ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಒಪ್ಪಿಕೊಂಡರು. ಇದರಿಂದ ಭಾರತದಲ್ಲಿ ಏಕ ಸಂವಿಧಾನ, ಒಂದೇ ರೀತಿಯ ಶಾಸನ ಹಾಗೂ ನ್ಯಾಯಾಲಯ ಪದ್ಧತಿ ಸ್ಥಾಪನೆಯಾಯಿತು. ಬ್ರಿಟಿಷರ ಆಡಳಿತ ವ್ಯವಸ್ಥೆಯ ಮಾದರಿಯನ್ನು ಬಳಸಲಾಯಿತು. ಬ್ರಿಟನ್ ಮಾದರಿಯ ಸಂಸದೀಯ ಪದ್ಧತಿ, ಕೆಲವು ಆಡಳಿತ ಅಂಶಗಳು ಹಾಗೂ ಬ್ರಿಟಿಷರು ಜಾರಿಗೆ ತಂದಿದ್ದ 1935 ರ ಭಾರತ ಸರ್ಕಾರ ಕಾಯ್ದೆಯ ಸುಮಾರು 250 ವಿಧಿಗಳನ್ನು ಬಳಸಿಕೊಳ್ಳಲಾಯಿತು. ಈ ಎಲ್ಲಾ ಅಂಶಗಳು ರಾಷ್ಟ್ರವಾದದ ಭಾವನೆಗಳು ಹೆಚ್ಚು ಬಲಗೊಳ್ಳಲು ಕಾರಣವಾಯಿತು. ಇನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯ ಸ್ವೀಕಾರದಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಹಲವಾರು ರೀತಿಯಲ್ಲಿ ಸಂರಚನೀಯವಾದ ಬದಲಾವಣೆಗಳು ಉಂಟಾದವು. ಉದಾಹರಣೆಯಾಗಿ ನೋಡುವುದಾದರೆ ‘ಹೂಲಿಗಮಾನ್ಯ ಪದ್ಧತಿ’ ಹಾಗೂ ‘ಜಮೀನ್ದಾರಿ ಪದ್ಧತಿ’ ಗಳು ಅಂತ್ಯಗೊಂಡವು. ಅಸ್ಪೃಶ್ಯತೆ ಆಚರಣೆ ನಿಷೇಧ, ವಿವಾಹ, ಕುಟುಂಬ, ಜಾತಿ, ಉದ್ಯೋಗ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳಾದವು. ಸ್ತ್ರೀ ಪುರುಷ ನಡುವಿನ ತಾರತಮ್ಯ ಕಡಿಮೆಯಾಗಿ ಸಮಾನ ಅವಕಾಶಗಳು ಲಭ್ಯವಾಗತೊಡಗಿದವು. ಸಾಮಾಜಿಕ ಸಂಬಂಧಗಳಲ್ಲೂ ಬಹಳಷ್ಟು ಬದಲಾವಣೆಗಳು ಸಂಭವಿಸಿದವು. ಈ ಹಂತದಲ್ಲಿ ತುಂಬಾ ಹಿಂದೆ ಬಿದ್ದಿದ್ದ ಮಧ್ಯಮ ವರ್ಗವು ಕ್ರಿಯಾಶೀಲತೆಯಿಂದ ಕಾರ್ಯ ಪ್ರವೃತ್ತವಾಗಿ ಆಡಳಿತ, ರಕ್ಷಣೆ, ಸಹಕಾರ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯವಾಗಿ ತನ್ನ ಪಾತ್ರವನ್ನು ನಿರ್ವಹಿಸುವ ಮೂಲಕ ಮುನ್ನಡೆಯನ್ನು ಪಡೆಯಿತು.

5. ನವೀನ ಜೀವನಶೈಲಿ:

ಪಾಶ್ಚಾತ್ಯೀಕರಣದ ಪ್ರಭಾವವು ಭಾರತೀಯರ ಜೀವನಶೈಲಿಯ ಮೇಲೆ ಉಂಟಾಗಿದ್ದು, ಪಾಶ್ಚಾತ್ಯ ಶಿಕ್ಷಣ ಪಡೆದ ಭಾರತೀಯರು ಕ್ರಮೇಣ ಪಾಶ್ಚಾತ್ಯ ಮಾದರಿಯನ್ನೇ ಅನುಕರಣೆ ಮಾಡತೊಡಗಿದರು. ಜೀವನಶೈಲಿ ಎಂದಾಗ ಜನರನ್ನು ಒಳಗೊಳ್ಳುವ ಊಟೋಪಚಾರ, ಉಡುಪು ತೊಡುಪು, ಅಭ್ಯಾಸ ಹವ್ಯಾಸ, ಮನೋಭಾವ, ಮನರಂಜನೆ, ಮನೆಯೊಳಗಿನ ಹಾಗೂ ಹೊರಗಿನ ವ್ಯವಹಾರಗಳ ಮೇಲೆ ಪಾಶ್ಚಾತ್ಯ ಪ್ರಭಾವ ಗಮನಾರ್ಹವಾಗಿ ಹೆಚ್ಚಾಗತೊಡಗಿತು. ಅವುಗಳಲ್ಲಿ ಕೆಲವು ಪ್ರಮುಖ ಅಂಶಗಳು ಹೀಗಿವೆ:

ಆಹಾರದ ಪದ್ಧತಿ ಹಾಗೂ ಕ್ರಮದ ಮೇಲೆ ಪರಿಣಾಮ: ಹಿಂದಿನ ಕಾಲದಿಂದಲೂ ಸಾಂಪ್ರದಾಯಿಕವಾಗಿ ಭಾರತೀಯರು ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಇಂದು ಊಟದ ಮೇಜಿನ ಮೇಲೆ ತಟ್ಟೆ ಇಟ್ಟು ಊಟ ಮಾಡುವುದನ್ನು ಆರಂಭಿಸಿದ್ದಾರೆ. ಅಲ್ಲದೆ ಅಡುಗೆ ತಯಾರಿಸುವ ಕೊಠಡಿಯು ಪ್ರತ್ಯೇಕವಾಗಿ ವಿನ್ಯಾಸಗೊಂಡು ಪಾಶ್ಚಾತ್ಯರ ಶೈಲಿಯಲ್ಲಿರುವುದನ್ನು ನೋಡಬಹುದು. ಪರಿಕರಗಳೆಲ್ಲವೂ ಮಣ್ಣಿನ, ಕಂಚಿನ, ಇಲ್ಲವೇ ತಾಮ್ರದ ರೂಪದಲ್ಲಿದ್ದವು. ಈಗ ಅವುಗಳು ಬದಲಾಗಿವೆ. ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು, ಚಮಚ, ವಿವಿಧ ಕತ್ತರಿಸುವ ಉಪಕರಣಗಳು ಬಳಕೆಯಾಗುತ್ತಿವೆ. ಸಾಮಾನ್ಯವಾಗಿ ಹಿಂದಿನ ದಿನಗಳಲ್ಲಿ ಮನೆಯಲ್ಲಿ ಮೊದಲು ಮಕ್ಕಳು ಹಿರಿಯರು ಊಟ ಮಾಡಿದ ನಂತರ ಸ್ತ್ರೀಯರು ಊಟ ಮಾಡುತ್ತಿದ್ದರು. ಪ್ರಸ್ತುತ ಎಲ್ಲರೂ ಜೊತೆಯಲ್ಲಿ ಊಟ ಮಾಡುತ್ತಿದ್ದಾರೆ. ಜೊತೆಗೆ ಊಟದಲ್ಲಿ ಉತ್ತಮ ಗುಣಮಟ್ಟತೆಗಾಗಿ ಸೊಪ್ಪು ತರಕಾರಿಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ಮದ್ಯಮಾಂಸದ ಬಳಕೆಯು ಸ್ವೀಕರಿಸಲ್ಪಟ್ಟಿದೆ. ಯಾವುದೇ ಜಾತಿಭೇದಗಳಿಲ್ಲದೆ ವಿವಿಧ ಶೈಲಿಯ ಹೋಟೆಲ್‌ಗಳಲ್ಲಿ ಊಟ ಮಾಡುತ್ತಾರೆ. ಪಾಶ್ಚಾತ್ಯ ಮಾದರಿ ವಿವಿಧ ತಿನಿಸುಗಳು, ಸ್ನಾಕ್ಸ್ ಗಳು, ಪಿಜ್ಜಾ, ಬರ್ಗರ್, ಚಾಪ್ಸ್, ಸೂಪ್, ಗೋಬಿ, ಪಾನಿಪೂರಿ, ಮಿರ್ಚಿ ಹೀಗೆ ನಾನಾ ತರದ ಖಾದ್ಯಗಳನ್ನು ಸೇವಿಸುತ್ತಾರೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುವ ಮೂಲಕ ಮನೆ ಬಾಗಿಲಿಗೆ ಸಿದ್ಧ ಆಹಾರ ತ್ವರಿತಗತಿಯಲ್ಲಿ ಸಿಗುತ್ತಲಿದೆ. ಹೀಗೆ ಆಹಾರ ಪದ್ಧತಿ ಹಾಗೂ ಕ್ರಮಗಳಲ್ಲಿ ವಿಶಿಷ್ಟತೆ ಕಾಣುತ್ತಿದ್ದೇವೆ.

ಉಡುಪಿನ ಮಾದರಿ ಹಾಗೂ ವಿನ್ಯಾಸಗಳಲ್ಲಿ ಬದಲಾವಣೆ: ಭಾರತದಲ್ಲಿ ಪಾರಂಪರಿಕವಾಗಿ ಕೈಯಿಂದ ನೇಯ್ದ ಬಟ್ಟೆಗಳು ಬಳಕೆಯಲ್ಲಿದ್ದವು. ಖಾದಿ ಬಟ್ಟೆಗಳಿಗೂ ಮಹತ್ವವಿತ್ತು. ಪಾಶ್ಚಾತ್ಯೀಕರಣದಿಂದ ನೂಲುವ ಬಟ್ಟೆಗಳ ಬದಲಾಗಿ ನೈಲಾನ್, ಟೆರಿಲಿನ್, ಟ್ರೈಕೋಟ್ ಮುಂತಾದ ಕಾರ್ಖಾನೆ ನಿರ್ಮಿತ ಬಟ್ಟೆಗಳು ಜನಪ್ರಿಯಗೊಂಡಿವೆ. ಹಿಂದೆ ಧಾರ್ಮಿಕ ಶುದ್ಧತೆಯ ಪರಿಕಲ್ಪನೆಯ ಅಡಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳಿದ್ದವು. ಆದರೆ ಇಂದು ಆಧುನಿಕ ಶೈಲಿಯ ಉಡುಗೆ ತೊಡುಗೆಗಳ ಆಕರ್ಷಣೆಗೆ ಒಳಪಟ್ಟಿವೆ. ವಿವಿಧ ವಿನ್ಯಾಸದ ಪ್ಯಾಂಟು, ಶರ್ಟ್‌ಅನ್ನು ಎಲ್ಲರೂ ಧರಿಸುತ್ತಾರೆ. ಅದರಲ್ಲೂ ಸರಳ ಶೈಲಿಯ ಫ್ರಾಕ್, ಶರ್ಟ್, ಚೂಡಿದಾರ್, ಬರ್ಮುಡಾ, ಟೀ ಶರ್ಟ್ಸ್ ಮುಂತಾದವು ಹೆಚ್ಚು ಬಳಕೆಯಲ್ಲಿವೆ. ಬ್ರಿಟಿಷರ ದೆಸೆಯಿಂದ ಭಾರತದಲ್ಲಿ ಸೂಟು ಬೂಟು, ಟೈ, ಕ್ಯಾಪ್, ಗೌನ್, ಪ್ಯಾಂಟ್‌ಗಳ ಪರಿಚಯವಾಗಿ ಇಂದು ಇವುಗಳು ಸಾಮಾನ್ಯವಾಗಿ ಬಿಟ್ಟಿವೆ.

ಭಾಷೆಯಲ್ಲಿ ಬದಲಾವಣೆ: ಭಾರತೀಯರು ಅನಾದಿ ಕಾಲದಿಂದಲೂ ದೇಶೀಯ ಮಾತೃಭಾಷೆಯನ್ನು ಬಳಸುತ್ತಿದ್ದರು. ಪಾಶ್ಚಾತ್ಯೀಕರಣದ ಪ್ರಭಾವದಿಂದ ವಿವಿಧ ಭಾಷೆಯ ಪದಗಳನ್ನು ಅದರಲ್ಲೂ ಬ್ರಿಟಿಷರು ಬಳಸಿದ ಇಂಗ್ಲಿಷ್ ಭಾಷೆಯ ಕೆಲವು ಪದಗಳು ಮಾತೃಭಾಷೆಯ ಪದಗಳೇ ಎನ್ನುವಷ್ಟರ ಮಟ್ಟಿಗೆ ಬಳಕೆಯಲ್ಲಿವೆ. ಕೋರ್ಟ್, ಬಸ್, ರೋಡ್, ಕರೆಂಟ್, ಬೈಕ್, ಟ್ರ್ಯಾಕ್ಟರ್, ಫೈಲ್, ಮೊಬೈಲ್, ಗೌರ್ನಮೆಂಟ್, ಬಾರ್ ಹೀಗೆ ಮುಂತಾದ ಅಸಂಖ್ಯಾತ ಪದಗಳು ಬಳಸುವುದನ್ನು ನೋಡುತ್ತೇವೆ. ಆಧುನಿಕ ಶಿಕ್ಷಣದ ಪ್ರಭಾವದಿಂದ ಪಾಶ್ಚಾತ್ಯರ ಜೀವನಶೈಲಿಯಂತೆ ಭಾಷೆಯಲ್ಲಿ ಹಲವಾರು ಬದಲಾವಣೆಗಳಾಗಿವೆ.

ವಿವಾಹದ ಮೇಲಿನ ಪ್ರಭಾವ: ವಿವಾಹವು ಜೀವನದ ಪ್ರಮುಖ ಘಟ್ಟ. ವಿವಾಹಿತರ ಬದುಕು ಹಸನಾಗಿರಲಿ ಎಂದು ಇಡೀ ಕುಟುಂಬವು ಧಾರ್ಮಿಕ ಕ್ರಿಯಾ ವಿಧಿಗಳಂತೆ ಶಾಸ್ತ್ರ ವಿಧಿತವಾಗಿ ನಡೆಸುತ್ತಿದ್ದರು. ಹಿರಿಯರು ವಧು-ವರರ ಉಪೇಕ್ಷೆ ಇಲ್ಲದೆ ಸಂಬಂಧಗಳನ್ನು ಏರ್ಪಡಿಸುತ್ತಿದ್ದರು. ಸುಮಾರು ಆರು ಏಳು ದಿನಗಳವರೆಗೂ ವಿವಾಹಗಳು ನಡೆಯುತ್ತಿದ್ದವಂತೆ. ಜೀವನಪರ್ಯಂತ ಕಷ್ಟ ಸುಖಗಳಲ್ಲಿ ಇಬ್ಬರೂ ಜೊತೆ ಇರುತ್ತೇವೆ ಎಂಬ ಸಂಕಲ್ಪದೊಂದಿಗೆ ಸಪ್ತಪದಿ ತುಳಿಯುತ್ತಿದ್ದರು. ಒಂದು ಧಾರ್ಮಿಕ ಕಾರ್ಯಕ್ರಮವಾಗಿ ಬಳಕೆಯಲ್ಲಿತ್ತು. ಪ್ರಸ್ತುತ ದಿನಮಾನದಲ್ಲಿ ವಿವಾಹದ ಏರ್ಪಾಡು, ವಧು ವರರ ಆಯ್ಕೆ, ಅವರಿಬ್ಬರೂ ವ್ಯಕ್ತಿಗಳು ನಿರ್ಧರಿಸುತ್ತಾರೆ. ವಿವಾಹ ಸಮಾರಂಭವು ಸಹ ಬದಲಾಗಿದೆ. ಹೊಸತನ ಕಾಣುತ್ತಿದೆ. ವಿವಾಹದ ಶಾಶ್ವತ ಬಂಧ ಇಂದು ದುರ್ಬಲವಾಗುತ್ತಿದೆ. ಅಲ್ಲದೆ ಪ್ರೇಮ ವಿವಾಹಗಳು ಯಥೇಚ್ಛವಾಗಿವೆ. ಶಾಸ್ತ್ರಗಳು ಮಹತ್ವ ಕಳೆದುಕೊಂಡು ಸಾಂಕೇತಿಕ ಆಚರಣೆಗಳಾಗಿವೆ. ಪಾಶ್ಚಾತ್ಯ ಮಾದರಿಯ ಎಂಗೇಜ್‌ಮೆಂಟ್, ಪ್ರಿ ವೆಡ್ಡಿಂಗ್ ಶೂಟ್, ರಿಸೆಪ್ಶನ್, ಸಾಮೂಹಿಕ ನೃತ್ಯ, ಸಂಗೀತ ಮೊದಲಾದ ಅಂಶಗಳು ಕಾಣುತ್ತಿವೆ.

ಕುಟುಂಬದ ಮೇಲೆ ಪರಿಣಾಮ: ಕುಟುಂಬದಲ್ಲಿ ಹಿರಿಯ ವ್ಯಕ್ತಿ (ಕರ್ತೃ) ಯ ಯಜಮಾನಿಕೆ, ಶ್ರಮ ವಿಭಜನೆ, ಪಾಲನೆ ಪೋಷಣೆ, ರಕ್ಷಣೆ, ಮನೋರಂಜನೆ ಇವೆಲ್ಲವೂ ಕಾಣುತ್ತಿತ್ತು. ಕುಟುಂಬ ಎಂದರೆ ಅದು ಅವಿಭಜಿತ ಕುಟುಂಬವೇ ಎಂಬ ಅರ್ಥ ಕೊಡುತ್ತಿತ್ತು. ಪ್ರಸ್ತುತ ದಿನಮಾನದಲ್ಲಿ ಅವಿಭಜಿತ ಕುಟುಂಬ ದುರ್ಬಲವಾಗಿದೆ. ಇಂದಿನ ಕುಟುಂಬದ ಸದಸ್ಯರು ವೈವಾಹಿಕ ಜೀವನ ಆನಂದಿಸಲು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಪಾಶ್ಚಾತ್ಯ ಸಂಸ್ಕೃತಿಯ ಮಾದರಿಯಲ್ಲಿ ವೈಯಕ್ತಿಕೀಕರಣಕ್ಕೆ ಹೆಚ್ಚು ಪ್ರಶಸ್ತ್ಯ ಕೊಡುತ್ತಿದ್ದಾರೆ. ವಧು-ವರರ ಬಂಧಗಳು ಸಹ ಬಿರುಕುಗೊಂಡಿವೆ. ವೈಯಕ್ತಿಕ ಸುಖಾಪೇಕ್ಷೆಯಿಂದ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಮಹಿಳೆಯರ ಸ್ಥಿತಿಗತಿ: ಪ್ರಾಚೀನ ಕಾಲದಿಂದಲೂ ಕೆಲವು ಅವಧಿಯಲ್ಲಿ ಸ್ತ್ರೀಯರಿಗೆ ಉತ್ತಮ ಸ್ಥಾನ ಮಾನಗಳಿದ್ದರೆ, ಕೆಲವು ಅವಧಿಯಲ್ಲಿ ಸಂದಿಗ್ಧ ಪರಿಸ್ಥಿತಿಗಳಿದ್ದವು. ಮಧ್ಯಕಾಲೀನ ಅವಧಿಯಲ್ಲಿ ಮಹಿಳೆಯರ ಸ್ಥಿತಿಗತಿಗಳು ಅಧಃಪತನ ಹೊಂದಿದ್ದವು. ಇಂದು ಮಹಿಳೆಯರ ಸ್ಥಿತಿಗತಿಗಳು ಉತ್ತಮವಾಗಿವೆ ಎಂದರೆ ಅದರ ಕೀರ್ತಿ ಪಾಶ್ಚಾತ್ಯೀಕರಣಕ್ಕೆ ಸಲ್ಲುತ್ತದೆ. ಭಾರತದಲ್ಲಿ ಬ್ರಿಟಿಷರು ಜಾರಿಗೆ ತಂದ ಕೆಲವು ಕಾಯ್ದೆ ಕಾನೂನುಗಳಿಗೆ ಸ್ತ್ರೀಯರು ನಿಟ್ಟುಸಿರು ಬಿಡುವಂತಾಯಿತು. ಅಲ್ಲದೆ ಸಾರ್ವತ್ರಿಕ ಶಿಕ್ಷಣ ಪದ್ಧತಿ, ಇಂಗ್ಲಿಷ್ ಶಿಕ್ಷಣ, ಸಾಂವಿಧಾನಿಕ ಸವಲತ್ತುಗಳು ಸಮಾಜದಲ್ಲಿ ಸಮಾನತೆ ತರುವಲ್ಲಿ ಸಹಾಯವಾಯಿತು. ಈ ಮೂಲಕ ಮಹಿಳೆಯರ ಸ್ಥಿತಿಗತಿಗಳು ಬದಲಾಗತೊಡಗವು. ಇಂದು ಮಹಿಳೆಯರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಅರ್ಹತೆಯನ್ನು ಪಡೆಯುತ್ತಿದ್ದಾರೆ. ಎಲ್ಲಾ ವೃತ್ತಿಗಳನ್ನು ನಿಭಾಯಿಸುತ್ತಿದ್ದಾರೆ. ತಮ್ಮ ಸೂಕ್ತ ಸ್ಥಾನಮಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸಂಘಟಿತರಾಗಿ ಅನೇಕ ಹೋರಾಟಗಳಲ್ಲಿ, ಚಳುವಳಿಗಳಲ್ಲಿ ಸಕ್ರಿಯರಾಗಿದ್ದಾರೆ. ವಿವಾಹ ಮತ್ತು ಕುಟುಂಬಗಳಂತಹ ಸಂಸ್ಥೆಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಜೊತೆಗೆ ಪುರುಷರ ಒಡಗೂಡಿ ಹೊಂದಾಣಿಕೆ ಜೀವನ ನಡೆಸುತ್ತಿದ್ದಾರೆ.

ಇತರ ಪ್ರಭಾವಗಳು: ಪಾಶ್ಚಾತ್ಯೀಕರಣದ ಪ್ರಭಾವವು ಹೊಸ ಬದಲಾವಣೆಯನ್ನು ಸೃಷ್ಟಿಸಿತು. ಸಾರಿಗೆ ಸಂಪರ್ಕದ ಅಭಿವೃದ್ಧಿಯಿಂದ ಎಲ್ಲಾ ಜಾತಿ ಸದಸ್ಯರು ಒಟ್ಟಿಗೆ ಪ್ರಯಾಣ ಮಾಡಲು ಸಹಕಾರಿಯಾಯಿತು. ಇದರಿಂದ ಮಡಿ ಮೈಲಿಗೆ ಆಚರಣೆಗೆ ತಿಲಾಂಜಲಿ ನೀಡಲಾಯಿತು. ಜಾತಿ ಜಾತಿಗಳ ನಡುವೆ ಇದ್ದ ಅಂತರ ಕಡಿಮೆಯಾಯಿತು. ಹೋಟೆಲ್‌ಗಳಲ್ಲಿ ಸಹಪಂಕ್ತಿ ಭೋಜನಕ್ಕೆ ಅವಕಾಶವಾಯಿತು. ಸಿನಿಮಾ ಮಂದಿರಗಳು ಮನರಂಜನೆಯ ವಾಣಿಜ್ಯ ಕೇಂದ್ರಗಳಾದವು. ಕ್ಲಬ್ ಗಳು, ಪಾನಗೃಹಗಳು ವಿಲಾಸಿ ತಾಣಗಳಾದವು. ಸ್ನೇಹಿತರ ಜೊತೆಗೂಡಿ ಪಾರ್ಟಿಗಳು ಪ್ರಾರಂಭವಾದವು. ಪಾಶ್ಚಾತ್ಯ ಮಾದರಿಯಲ್ಲಿ ಭಾರತದಲ್ಲಿಯೂ ವಿವಾಹ ಸಮಾರಂಭಗಳು, ವಾರ್ಷಿಕೋತ್ಸವ ಆಚರಣೆಗಳು ಎಲ್ಲರ ಮನ್ನಣೆ ಪಡೆದವು. ಪ್ರತಿ ಹಳ್ಳಿಗಳಲ್ಲಿಯೂ ಇಂದು ಹುಟ್ಟಿದ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುವುದು, ಬಂದವರಿಗೆ ಭೋಜನ ವ್ಯವಸ್ಥೆ ಮಾಡುವುದು, ತಮ್ಮ ತಮ್ಮ ಗಿಫ್ಟ್‌ಗಳನ್ನು ಕಾಣಿಕೆಯಾಗಿ ನೀಡುವುದು, ಶುಭ ಹಾರೈಸುವುದು ಎಲ್ಲವೂ ಎಲ್ಲರಿಗೂ ತಿಳಿದಿರುವ ಒಂದು ಆಚರಣೆ ಪದ್ಧತಿಯಾಗಿ ಬಳಕೆಯಲ್ಲಿದೆ. ಇನ್ನು ಸನ್ಮಾನ ಸಮಾರಂಭಗಳು ಸಹ ಇದೇ ಪರಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿ ಪಡೆದಿರುವ ಆಚರಣೆ ಎಂದರೆ ಹೊಸ ವರ್ಷ ದಿನಾಚರಣೆ, ಕ್ರೈಸ್ತ ವರ್ಷದ ಆರಂಭದ ದಿನವಾಗಿ ಎಲ್ಲ ಪಶ್ಚಿಮ ದೇಶಗಳು ವಿಜೃಂಭಣೆಯಿಂದ ಆಚರಿಸುತ್ತವೆ. ಅದರಂತೆ ಭಾರತದಲ್ಲಿಯೂ ಸಹ ಎಲ್ಲರೂ ಉತ್ಸಾಹ ಭರಿತರಾಗಿ ಆಚರಿಸುತ್ತಾರೆ. ಪ್ರತಿ ಹಳ್ಳಿಹಳ್ಳಿಯಲ್ಲಿಯೂ ರಸ್ತೆ, ಗೋಡೆ ಮೇಲೆ ಶುಭಾಶಯದ ವಾಕ್ಯಗಳು ಕಾಣುತ್ತವೆ. ಜೊತೆಗೆ ಕೇಕ್ ಕತ್ತರಿಸುವ ಮೂಲಕ ಪರಸ್ಪರ ಶುಭಾಶಯಗಳು ಕೋರುತ್ತಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ನಗರದಲ್ಲಿಯೂ ವಿಜೃಂಭಿಸುವ ದೀಪಾಲಂಕಾರದಿಂದ ಕುಡಿದು, ಕುಣಿದು- ಕುಪ್ಪಳಿಸಿ ಆಚರಿಸುವುದು ಕಂಡುಬರುತ್ತದೆ. ಮೇಲಿನ ಎಲ್ಲಾ ಅಂಶಗಳು ಪಾಶ್ಚಾತ್ಯೀಕರಣದಿಂದ ಪ್ರಭಾವಿತರಾಗಿ ನವೀನ ರೀತಿಯ ಜೀವನಶೈಲಿಯನ್ನು ಅಳವಡಿಕೊಂಡ ಆಚರಣೆಗಳಾಗಿವೆ.

6. ಸಾಮಾಜಿಕ ಸುಧಾರಣಾ ಆಂದೋಲನಗಳಿಗೆ ಸ್ಫೂರ್ತಿ:

ಇಂಗ್ಲಿಷ್ ಶಿಕ್ಷಣದ ಪ್ರಸಾರದಿಂದ ಸಾಂಸ್ಕೃತಿಕ, ರಾಜಕೀಯ, ರಾಷ್ಟ್ರೀಯತೆಯ ಬೆಳವಣಿಗೆಯಾಯಿತು. ಸಮಾಜದ ಸುಧಾರಣೆ ಮತ್ತು ಸಮಾಜದ ಕಲ್ಯಾಣದ ಬಗ್ಗೆ ಒಲವು ಸೃಷ್ಟಿಯಾಯಿತು. ಪಾಶ್ಚಾತ್ಯರ ವಿಚಾರಗಳು, ಮೌಲ್ಯಗಳು ಭಾರತದಲ್ಲಿರುವ ಅನೇಕ ಗಣ್ಯರನ್ನು ಪ್ರಚೋದಿಸಿ ಭಾರತೀಯ ಸಮಾಜದಲ್ಲಿ ಬೇರೂರಿದ್ದ ಹಲವಾರು ಅನಿಷ್ಟ ಪದ್ಧತಿಗಳು ಹಾಗೂ ಕಂದಾಚಾರಗಳ ನಿರ್ಮೂಲನೆಗಾಗಿ ಸಾಮಾಜಿಕ ಸುಧಾರಣಾ ಆಂದೋಲನಗಳು ಪ್ರಾರಂಭವಾದವು. ರಾಜಾರಾಮ್ ಮೋಹನ್ ರಾಯ್ ರವರ ‘ಬ್ರಹ್ಮ ಸಮಾಜ', ಮಹರ್ಷಿ ದಯಾನಂದ ಸರಸ್ವತಿಯವರ ‘ಆರ್ಯ ಸಮಾಜ’, ಸ್ವಾಮಿ ವಿವೇಕಾನಂದರ ‘ಶ್ರೀರಾಮಕೃಷ್ಣ ಮಿಷನ್', ಜ್ಯೋತಿರಾವ್ ಫುಲೆ ಅವರ ‘ಸತ್ಯಶೋಧಕ ಸಮಾಜ' ಇತ್ಯಾದಿಗಳು ಸಮಾಜದಲ್ಲಿದ್ದ ಗುಲಾಮಗಿರಿ ಪದ್ಧತಿ, ಸ್ತ್ರೀ ಶಿಶುಹತ್ಯೆ, ಸತಿ ಸಹಗಮನ, ಅಸ್ಪೃಶ್ಯತೆ, ಬಾಲ್ಯ ವಿವಾಹ, ಬಾಲ ವಿಧವಾ ಪುನರ್ ವಿವಾಹ, ಅಂತರ್ಜಾತಿಯ ವಿವಾಹ, ಸ್ತ್ರೀಯರ ಶೋಷಣೆ, ಬಹುಪತ್ನಿತ್ವ ಮುಂತಾದ ಕ್ರೂರ ಅಮಾನವೀಯ ಆಚರಣೆಗಳನ್ನು ಕಾನೂನಿನ ಮೂಲಕ ಹೊರಹಾಕಲು ಪ್ರಯತ್ನಿಸಿದವು.

7. ಸಾಮಾಜಿಕ ಪಿಡುಗುಗಳ ನಿರ್ಮೂಲನೆ:

‘ಮಾನವ ಸಂಘ ಜೀವಿ' ಅವನು ಸಮಾಜದಲ್ಲಿ ಬದುಕುವಾಗ ಕೆಲವು ಒಳ್ಳೆಯ ಮತ್ತು ಕೆಟ್ಟ ಪದ್ಧತಿಗಳನ್ನು ಪಾಲಿಸುತ್ತಾನೆ. ಹಾಗೆಯೇ ಸಮಾಜವನ್ನು ಬಾಧಿಸಿದ ಅದರಲ್ಲೂ ಸ್ತ್ರೀಯರ ಸ್ಥಾನಮಾನಗಳು ಅದೋಗತಿಗೆ ತಲುಪಿದ ಕೆಲವು ಅನಿಷ್ಟ ಆಚರಣೆಗಳಿವೆ. ಅವುಗಳೆಂದರೆ ಸತಿ ಪದ್ಧತಿ, ಪರದಾ ಪದ್ಧತಿ, ದೇವದಾಸಿ ಪದ್ಧತಿ, ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಮದ್ಯಪಾನ, ಗುಲಾಮಗಿರಿ ಮುಂತಾದವುಗಳು. ಇವು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವನ್ನು ‘ಅಂಧಕಾರ ಯುಗ' ಎಂದು ಕರೆದಿದ್ದಾರೆ. ಬ್ರಿಟಿಷರ ಆಳ್ವಿಕೆಯಿಂದ ಭಾರತದಲ್ಲಿದ್ದಂತಹ ಇಂತಹ ನೀಚ ಆಚರಣೆಗಳು ಕಾನೂನಿನಿಂದ ಹೊರಹಾಕಲ್ಪಟ್ಟವು. ಸಮಾನತೆ ಸಾರುವ ಕಾನೂನುಗಳು ಸಮಾಜದಲ್ಲಿದ್ದ ಅನಿಶ್ಚಿತತೆಯನ್ನು ದೂರಮಾಡಿತು. ಇಂತಹ ಸ್ಥಿತಿ ನಿರ್ಮಾಣ ಮಾಡಲು ಪೂರ್ಣ ಬ್ರಿಟಿಷರೇ ಪ್ರಯತ್ನಿಸಲಿಲ್ಲ. ಭಾರತದಲ್ಲಿದ್ದ ವಿದ್ಯಾವಂತ ಬುದ್ಧಿಜೀವಿಗಳು, ನೇತಾರರು, ಸಾಮಾಜಿಕ ಸುಧಾರಕರ ಪ್ರಯತ್ನದ ಫಲವಾಗಿ ಎಂಬುದನ್ನು ಮರೆಯುವಂತಿಲ್ಲ. ಉದಾಹರಣೆಯಾಗಿ ನೋಡುವುದಾದರೆ ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್ ರಾಯ್ ರವರ ಅಣ್ಣನ ಸಾವಿನ ನಂತರ ಅಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಸತಿ ಪದ್ಧತಿಯಂತೆ ಅವರ ಅತ್ತಿಗೆಯನ್ನು ಜೀವಂತವಾಗಿ ದಹಿಸುವ ಸ್ಥಿತಿಯನ್ನು ನೋಡಿ ಮನನೊಂದಿದ್ದರು, ಕೂಡಲೇ ಅಂದಿನ ಬ್ರಿಟಿಷ್ ಅಧಿಕಾರಿ ವಿಲಿಯಂ ಬೆಂಟಿಂಗ್‌ಗೆ ಪತ್ರ ಬರೆದು ಸತಿ ಪದ್ಧತಿ ನಿಷೇಧಿಸುವಂತೆ ಮನವಿ ಮಾಡಿಕೊಂಡರು. ಇದು ಅಕ್ಷರ ಸಹ ವಿಲಿಯಂ ಬೆಂಟಿಂಗ್‌ಗೆ ಆಶ್ಚರ್ಯವಾಗಿತ್ತು. ಅವರು ಸ್ಪಂದಿಸಿ, ಕಮಿಟಿ ರಚಿಸಿ, ಅಧ್ಯಯನ ಮಾಡಿ ವರದಿ ನೀಡಿದ ಮೇಲೆ 1829 ರಲ್ಲಿ ಸತಿ ಪದ್ಧತಿಯ ನಿಷೇಧ ಕಾಯ್ದೆ ಜಾರಿಗೆ ಬಂದಿತು. ಹಾಗಾಗಿ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯಲ್ಲಿ ಬ್ರಿಟಿಷರು ಮಹತ್ವದ ಪಾತ್ರ ವಹಿಸಿದ್ದರು. ಈ ಮೂಲಕ ಪಾಶ್ಚಾತ್ಯೀಕರಣದ ಸಂಸ್ಕೃತಿಯ ಪ್ರಭಾವವನ್ನು ಅಲ್ಲಗೆಳೆಯುವಂತಿಲ್ಲ.

8. ರಾಷ್ಟ್ರೀಯತೆ ಬೆಳವಣಿಗೆ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ:

ಪಾಶ್ಚಾತ್ಯ ಜನರ ಉತ್ಕಟವಾದ ದೇಶಭಕ್ತಿಯ ಉತ್ಸಾಹವೇ ಭಾರತದಲ್ಲಿ ರಾಷ್ಟ್ರೀಯತೆ ಬೆಳವಣಿಗೆಗೆ ಕಾರಣವಾಯಿತು. ಸಾಮಾಜಿಕ ಅಭಿವ್ಯಕ್ತಿ, ರಾಷ್ಟ್ರದ ಕಲ್ಪನೆ, ರಾಜಕೀಯ ಸಂಘಟನೆ ಇವು ಪಾಶ್ಚಾತ್ಯ ಸಾಹಿತ್ಯ ಮತ್ತು ಚಿಂತನೆಯಿಂದ ಸ್ಫೂರ್ತಿಯ ಅಂಶಗಳ ಫಲವಾದವು, ಅವರ ವಿಚಾರಗಳು, ಮೌಲ್ಯಗಳಿಂದ ಪ್ರೇರಣೆ ಪಡೆದ ಭಾರತೀಯ ನಾಯಕರು ಸ್ವಾತಂತ್ರ್ಯ ಹೋರಾಟಕ್ಕೆ ಮುಂದಾದರು. ಪಾಶ್ಚಾತ್ಯ ದೇಶಗಳಲ್ಲಿ ನಡೆದಂತಹ ರಾಜಕೀಯ ಕ್ರಾಂತಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಳು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯನ್ನು ತುಂಬಿದವು. ಈ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಮುಂದಾದರು.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಕುರಿತು ವಿಶ್ಲೇಷಣೆ

ಪಶ್ಚಿಮ ದೇಶಗಳ ಪ್ರಭಾವವು ಭಾರತೀಯ ಸಮಾಜದ ಬಹುತೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದೆ. ಅಲ್ಮಾಟಾಸ್ ಎಂಬುವವರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವನ್ನು ನಾಲ್ಕು ಬಗೆಯ ಪರಿವರ್ತನೆಗಳ ಮೂಲಕ ವಿಶ್ಲೇಷಿಸಿದ್ದಾರೆ. ಪಶ್ಚಿಮ ದೇಶಗಳ ಸಂಸ್ಕೃತಿಯು ಭಾರತೀಯರಿಗೆ ನಿಜಕ್ಕೂ ಉತ್ತಮ ಮೌಲ್ಯಗಳನ್ನು ಕಲಿಸಿತೇ? ಇದು ಎಷ್ಟರಮಟ್ಟಿಗೆ ಪ್ರಯೋಜನಕಾರಿಯಾಗಿದೆ? ಎಂಬುದನ್ನು ಆಲೋಚಿಸಬೇಕಿದೆ.

ಈ ಹಿನ್ನೆಲೆಯಲ್ಲಿ ಧನಾತ್ಮಕ ಅಂಶಗಳು ಮತ್ತು ಋಣಾತ್ಮಕ ಅಂಶಗಳನ್ನು ಕುರಿತು ನೋಡೋಣ:

ಧನಾತ್ಮಕ ಅಂಶಗಳು:

ಎಲ್ಲರಿಗೂ ಸ್ವೀಕೃತವಾದ ಅಂಶಗಳಾಗಿವೆ. ಮಹತ್ತರ ಬದಲಾವಣೆ ಮೂಲಕ ಸಮಾಜದಲ್ಲಿ ನವೀನತೆಯನ್ನು ಸೃಷ್ಟಿಸಿವೆ.

ಪಾಶ್ಚಾತ್ಯೀಕರಣದ ಪ್ರಭಾವದಿಂದ ಭಾರತದಲ್ಲಿ ಶೈಕ್ಷಣಿಕ ಕ್ರಾಂತಿಯಾಗಿದ್ದು ಎಲ್ಲಾ ವರ್ಗದವರಿಗೂ ಶಿಕ್ಷಣ ದೊರೆಯುವಂತಾಯಿತು. ಜೊತೆಗೆ ಬ್ರಿಟಿಷರು ಜಾರಿಗೊಳಿಸಿದ ಇಂಗ್ಲಿಷ್ ಶಿಕ್ಷಣ ಬುದ್ಧಿಜೀವಿಗಳ ಬೆಳವಣಿಗೆಗೆ ಸಹಕಾರಿಯಾಯಿತು. ಬ್ರಿಟಿಷ್ ಶಿಕ್ಷಣ ಕುರಿತು ರಾಷ್ಟ್ರಪಿತ ಗಾಂಧೀಜಿಯವರು ತಮ್ಮ ಜೀವನ ಚರಿತ್ರೆಯಲ್ಲಿ “ಶಿಕ್ಷಣ ಪಡೆದ ಭಾರತೀಯರು ಬ್ರಿಟಿಷ್ ಮಾದರಿಯ ಸಜ್ಜನರಾಗತೊಡಗಿದರು” ಎಂದಿದ್ದಾರೆ.

ಬ್ರಿಟಿಷರ ಆಗಮನದಿಂದ ಭಾರತದ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳು ತೊಲಗಿ ಸಾಮಾಜಿಕ ಸುಧಾರಣೆ ಕಂಡಿತು.

ಸ್ವಾತಂತ್ರ್ಯ ಸಮಾನತೆ ಮಾನವತಾವಾದದಂತಹ ಅಂಶಗಳು ಬೆಳವಣಿಗೆಯಾಗಿ ಜಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸಿತು.

ಮಹಿಳೆಯರಿಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರಿಂದ ಅರಿವು ಮೂಡಿ ಸಬಲೀಕರಣ ಸಾಧಿಸುವಲ್ಲಿ ಯಶಸ್ವಿಯಾಯಿತು.

ಪಾಶ್ಚಾತ್ಯ ಮಾದರಿಯ ಭಾರಿ ಯಂತ್ರಗಳು, ತಂತ್ರಜ್ಞಾನದಿಂದ ಕಾರ್ಖಾನೆಗಳ ಸ್ಥಾಪನೆ ಆಧುನಿಕ ರೂಪ ಪಡೆಯಿತು.

ಸಾರಿಗೆ ಮತ್ತು ಸಂವಹನ ಕ್ರಾಂತಿಯಾಗಿ ರಸ್ತೆ, ರೈಲು, ಅಂಚೆ ವ್ಯವಸ್ಥೆ, ನೌಕಾಯಾನ, ದೂರವಾಣಿ ಮುಂತಾದ ಅಂಶಗಳ ಪರಿಚಯದಿಂದ ಜೀವನ ವಿಧಾನ ಬದಲಾಯಿತು.

ರಾಜಕೀಯ ಮತ್ತು ಆಡಳಿತಾತ್ಮಕವಾಗಿ ಜನರು ಸಂಘಟಿತರಾಗ ತೊಡಗಿದರು. ರಾಷ್ಟ್ರೀಯತೆ ಬಲವಾಗ ತೊಡಗಿತು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಅಂಶಗಳು ಪ್ರಭಾವ ಬೀರಿದವು.

ಪಾಶ್ಚಾತ್ಯ ಜೀವನಶೈಲಿ ಅನುಕರಣೆಯಿಂದ ಆಧುನಿಕ ಜೀವನಶೈಲಿ ಉದಯವಾಯಿತು. ವಿವಿಧ ಹೊಸ ಆಚರಣೆಗಳು ಜಾರಿಗೆ ಬಂದವು.

ಋಣಾತ್ಮಕ ಅಂಶಗಳು:

ಪಾಶ್ಚಾತ್ಯೀಕರಣ ಪ್ರಭಾವವು ಆರಂಭದಲ್ಲಿ ಭಾರತೀಯರಿಗೆ ಅನುಕೂಲತೆಗಳನ್ನು ತಂದು ಕೊಟ್ಟರೂ ಕಾಲಾಂತರದಲ್ಲಿ ಅವುಗಳು ಋಣಾತ್ಮಕ ಪರಿಣಾಮಗಳಿಗೆ ಕಾರಣವಾಯಿತು.

ಭಾರತದಲ್ಲಿ ಬ್ರಿಟಿಷರು ಜಾರಿಗೆ ತಂದ ‘ಒಡೆದು ಆಳುವ ನೀತಿ’ಯು ಹಿಂದೂ ಮತ್ತು ಮುಸ್ಲಿಮರಲ್ಲಿ ವಿಭಜನೆಯನ್ನು ತಂದಿತು. ಇದು ದೇಶದ ರಾಜಕೀಯ ಏಕತೆಯನ್ನು ನಾಶ ಮಾಡಿತು.

ಪಾಶ್ಚಾತ್ಯ ಸಂಸ್ಕೃತಿಯು ಕುಟುಂಬದ ರಚನೆಯ ಮೇಲೆ ಪ್ರಭಾವ ಬೀರಿ ಅವಿಭಜಿತ ಕುಟುಂಬಗಳು ವಿಭಜಿತ ಕುಟುಂಬಗಳಾಗಿ ಬದಲಾಗುತ್ತಿವೆ. ಹಿರಿಯರ ಮೇಲಿನ ಜವಾಬ್ದಾರಿ ಕಡಿಮೆಯಾಗಿದೆ.

ಪಾಶ್ಚಾತ್ಯರ ಜೀವನ ಶೈಲಿಯ ಅನುಕರಣೆ ಪ್ರತಿಯೊಂದು ಅಂಶಗಳಲ್ಲಿ ಕಂಡುಬಂದಿದ್ದರಿಂದ ಅವರ ದೋಷ ದೌರ್ಬಲ್ಯ, ದುಶ್ಚಟ ದುರಭ್ಯಾಸಗಳನ್ನೂ ಸಹ ಅನುಕರಣೆ ಮಾಡಿದರು. ಇದು ಸಮಸ್ಯೆಯಾಗಿ ತಲೆದೋರಿತು.

ಭಾರತೀಯರ ನಂಬಿಕೆ, ಆಚಾರ ವಿಚಾರಗಳು, ಮೌಲ್ಯ, ತತ್ವಾದರ್ಶಗಳಲ್ಲಿ ಬದಲಾವಣೆ ಸಂಭವಿಸಿತು.

ಧರ್ಮಾಧಾರಿತವಾದ ಸಾಮಾಜಿಕ ಧಾರ್ಮಿಕ ಆರ್ಥಿಕ ಕ್ಷೇತ್ರದಲ್ಲಿ ‘ಮತಾತೀತಕರಣ’ ಅಂಶಗಳು ಕಂಡುಬಂದವು.

ಪರಂಪರಾಗತವಾದ ಭಾರತೀಯ ಸಂಸ್ಕೃತಿಯ ಅಂಶಗಳು ಮೂಲೆಗುಂಪಾಗಿ ಪಾಶ್ಚಾತ್ಯ ಮಾದರಿಯ ಹೊಸ ಸಾಂಸ್ಕೃತಿಕ ಅಂಶಗಳು ಬೆಳವಣಿಗೆ ಆದವು. ಹಾಡು, ನೃತ್ಯ, ಸಂಗೀತ, ಚಲನಚಿತ್ರ ಮುಂತಾದವುಗಳ ವ್ಯಾಮೋಹ ಹೆಚ್ಚಾಯಿತು.

ಪಶ್ಚಿಮ ದೇಶಗಳ ಪ್ರಭಾವವು ಜೀವನಶೈಲಿಯನ್ನು ಬದಲಿಸಿದ ಪರಿಣಾಮವಾಗಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಬದಲಾದವು. ಕೀಳು ಸಂಪ್ರದಾಯವನ್ನು ಅಭಿವ್ಯಕ್ತಿಸುವ, ಅಪರಾಧವನ್ನು ಸೃಷ್ಟಿಸುವ ಅಂಶಗಳಾಗಿವೆ.

ಪಾಶ್ಚಾತ್ಯ ಸಂಸ್ಕೃತಿ ಆಚರಣೆಯಿಂದ ನಾವು ಮುಂದುವರಿದವರು ಹಾಗೂ ಪ್ರಗತಿಪರರು ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಜೀವನ ವಿಧಾನವನ್ನು ಅಪಹಾಸ್ಯ ಮಾಡತೊಡಗಿದರು.

ಉಪಸಂಹಾರ:

ಭಾರತವು ಅನಾದಿಕಾಲದಿಂದಲೂ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು ಸಾಂಸ್ಕೃತಿಕ ಆಚರಣೆಗಳು, ನಂಬಿಕೆ ಪದ್ಧತಿಗಳನ್ನು ಆಚರಿಸುತ್ತಾ ಸಾಗುತ್ತಿತ್ತು. ಇವುಗಳು ಕೆಲವರಿಗೆ ಸಾಧಕವಾಗಿದ್ದರೆ ಕೆಲವರಿಗೆ ಬಾಧಕವಾಗಿದ್ದು ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಸಮಾಜದಲ್ಲಿ ಪ್ರಭಾವ ಬೀರಿದ್ದವು. ಬ್ರಿಟಿಷರ ಆಗಮನದಿಂದ ಭಾರತದ ಚಿತ್ರಣವೇ ಬದಲಾಯಿತು. ಅವರು ಜಾರಿಗೆ ತಂದ ಹಲವಾರು ಕಾಯ್ದೆ ಕಾನೂನುಗಳು ಪ್ರಭಾವ ಬೀರಿದವು. ಸಾಮಾಜಿಕ ವ್ಯವಸ್ಥೆ ಪುನರ್ರಚನೆಯಾಯಿತು. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವು ಭಾರತದಲ್ಲಿ ದೊಡ್ಡ ಪರಿವರ್ತನೆಯನ್ನು ತಂದಿತು. ಶಿಕ್ಷಣ, ಕೈಗಾರಿಕೆ, ತಂತ್ರಜ್ಞಾನ, ಆಧುನಿಕತೆ, ಮೊದಲಾದ ಅಂಶಗಳು ಜನರ ಮನಸ್ಥಿತಿ ಬದಲಿಸಿ, ಹೊಸ ಆರ್ಥಿಕತೆಯನ್ನು ಸೃಷ್ಟಿಸಿತು. ಹೊಸ ಮೌಲ್ಯಗಳು, ತತ್ವಾದರ್ಶಗಳು ಅಭಿವ್ಯಕ್ತಿಸಿದವು. ಜೀವನದ ಕೆಲವೊಂದು ಕ್ಷೇತ್ರಗಳಲ್ಲಿ ಪಶ್ಚಿಮದ ಪ್ರಭಾವವು ಗಣನೀಯವಾದ ಪ್ರಗತಿಗೆ ಕಾರಣವಾಯಿತು. ನವೀನವಾದ ಜೀವನ ಶೈಲಿಯನ್ನು ಪರಿಚಯಿಸಿ ಅನುಕೂಲತೆಯನ್ನು ಸೃಷ್ಟಿಸಿತು.

ಪಾಶ್ಚಾತ್ಯೀಕರಣದ ಅಂಧಾನುಕರಣೆಯಿಂದ ಅನುಕೂಲತೆ ಜೊತೆಗೆ ಅನಾನುಕೂಲತೆಗಳು ಸಹ ಅಧಿಕವಾಗಿವೆ. ಬ್ರಿಟಿಷರ ಆಳ್ವಿಕೆ ಭಾರತದಲ್ಲಿ ಸಂಪತ್ತಿನ ಶೋಷಣೆ ಮಾಡಿತು. ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿಲ್ಲ. ಪಾಶ್ಚಾತ್ಯೀಕರಣದ ಭರದಲ್ಲಿ ದುಶ್ಚಟ ದುರಭ್ಯಾಸಗಳಿಗೆ ಬಲಿಯಾದರು. ಬ್ರಿಟಿಷರ ಆಗಮನ ಪಾಶ್ಚಾತ್ಯೀಕರಣದ ರಹದಾರಿ ಅಷ್ಟೇ. ಆದರೆ ಭಾರತದ ನಿಜವಾದ ಅಭಿವೃದ್ಧಿ ಸಾಧಿಸಿದ್ದು ಸ್ವಾತಂತ್ರ್ಯ ನಂತರದಲ್ಲಿ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಸಾಧಕ ಬಾಧಕಗಳೇನೇ ಇದ್ದರೂ ಪಾಶ್ಚಾತ್ಯೀಕರಣ ಭಾರತದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಯಿತು. ಪಾಶ್ಚಾತ್ಯ ಸಂಸ್ಕೃತಿಯ ಉತ್ತಮ ಅಂಶಗಳನ್ನು ಆಯ್ದುಕೊಂಡು, ನಮ್ಮ ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಸಮನ್ವಯ ಸಾಧಿಸಿ, ಭವ್ಯ ಭಾರತದ ಶ್ರೀಮಂತ ಸಂಸ್ಕೃತಿಯ ಸಾರವನ್ನು ಉಳಿಸಿಕೊಂಡು, ನಮ್ಮತನವನ್ನು ಬೆಳೆಸಿಕೊಂಡು ಸಮತೋಲಿತ ಹಾಗೂ ಸಮೃದ್ಧ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಅಡಿ ಟಿಪ್ಪಣಿ:

ಭಾರತೀಯ ಸಮಾಜ - (11ನೇ ಆವೃತ್ತಿ: 2015-16) ಪುಟ ಸಂಖ್ಯೆ - 217

ಸಮಾಜಶಾಸ್ತ್ರ ದರ್ಶನ ಭಾಗ-2 - (2011-12) ಪುಟ ಸಂಖ್ಯೆ - 1130

ಪರಾಮರ್ಶನ ಗ್ರಂಥಗಳು:

ಭಾರತೀಯ ಸಮಾಜ - ಕೆ. ಎನ್. ಶಂಕರ್ ರಾವ್, ಜೈ ಭಾರತ್ ಪ್ರಕಾಶನ ಮಂಗಳೂರು.

ಸಮಾಜಶಾಸ್ತ್ರ ದರ್ಶನ ಭಾಗ-2 - ಕೆ. ಎನ್. ಶಂಕರ್ ರಾವ್, ಜೈ ಭಾರತ್ ಪ್ರಕಾಶನ ಮಂಗಳೂರು.

ಭಾರತೀಯ ಸಮಾಜ - ರಾಮಚಂದ್ರ ಜೋಶಿ.

| format | Recurso digital |
| id | zenodo_https___doi_org_10_5281_zenodo_19418729 |
| institution | Zenodo |
| language | kan |
| publishDate | 2026 |
| publisher | Zenodo |
| record_format | zenodo |
| spellingShingle | ಭಾರತೀಯ ಸಮಾಜದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ. ವಸಂತಕುಮಾರ್ ಜೆ ಭಾರತೀಯ ಸಮಾಜದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ

| title | ಭಾರತೀಯ ಸಮಾಜದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ. |
| topic | ಭಾರತೀಯ ಸಮಾಜದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ |
| url | https://doi.org/10.5281/zenodo.19418729 |